ಅಚ್ಚಿನಧಾರಕ

 ಚಲಿಸುತ್ತಿರುವ ಯಂತ್ರದ ಒಂದು ಭಾಗಕ್ಕೆ ಆಧಾರವಾಗಿರುವ ಮತ್ತೊಂದು ಯಂತ್ರಭಾಗಕ್ಕೆ ಧಾರಕವೆಂದು (ಬೇರಿಂಗ್) ಹೆಸರು.

 ಮಟ್ಟ ದಂಡಗಳಿಗೆ (ಹಾರಿಜಾಂಟಲ್ ಷಾಫ್ಟ್) ಆಧಾರವಾಗಿರಲು ಉಪಯೋಗಿಸುವ ಅಚ್ಚಿನ ಧಾರಕದಲ್ಲಿ (ಜರ್ನಲ್ ಬೇರಿಂಗ್) ಆಧಾರ ಒತ್ತಡ ದಂಡದ ಅಕ್ಷಕ್ಕೆ ಲಂಬವಾಗಿದ್ದು, ದಂಡ ಧಾರಕದ ಮೂಲಕ ಹಾದುಹೋಗುತ್ತದೆ. ಈ ಧಾರಕಗಳಲ್ಲಿ ಸರಳ ಅಚ್ಚಿನಧಾರಕ (ಸಿಂಪಲ್ ಜರ್ನಲ್ ಬೇರಿಂಗ್) ಮತ್ತು ಕವಚದ ಅಚ್ಚಿನಧಾರಕ (ಬುಷ್ ಜರ್ನಲ್ ಬೇರಿಂಗ್) ಎಂಬ ಎರಡು ಬಗೆಗಳುಂಟು.

 ಸರಳ ಅಚ್ಚಿನ ಧಾರಕ: ಇದು ಎರಕಹೊಯ್ದ ಒಂದು ಘಟಕವಾಗಿದ್ದು ಅದರಲ್ಲಿ ಮಟ್ಟ ರಂಧ್ರವಿರುತ್ತದೆ. ಈ ಘಟಕಯಂತ್ರದ ಒಂದು ಸಮಗ್ರ ಭಾಗವಾಗಿರಬಹುದು ಅಥವಾ ಬೇರೆಯಾಗಿರಬಹುದು. ತಿರುಪುಗಳಿಂದ (ಬೋಲ್ಟ್) ಬಂಧಿಸಲು ಅನುಕೂಲವಾಗುವಂತೆ ಕೆಳಭಾಗ ವಿಸ್ತರಿಸಲ್ಪಟ್ಟಿರುತ್ತದೆ. ಇದನ್ನು ಚಿತ್ರ 1 ರಲ್ಲಿ ತೋರಿಸಿದೆ. ಈ ಬಗೆಯ ಧಾರಕದಲ್ಲಿ ದಂಡವನ್ನು ಒಂದು ತುದಿಯಿಂದ ಮಾತ್ರ ಜೋಡಿಸಲು ಸಾಧ್ಯ. ಕೆಲವು ಕಾಲದ ಅನಂತರ ಅಚ್ಚು ಮತ್ತು ಧಾರಕಗಳ ನಡುವಣ ಘರ್ಷಣೆಯ ಪರಿಣಾಮವಾಗಿ ಸಂಪರ್ಕ ಪ್ರದೇಶ ಸವೆಯುವುದುಂಟು. ಇದನ್ನು ಸರಿಪಡಿಸಲು ಈ ಧಾರಕದಲ್ಲಿ ಯಾವ ಸೌಲಭ್ಯವೂ ಇಲ್ಲ. ಆದುದರಿಂದ ಧಾರಕವನ್ನೇ ಬದಲಿಸಬೇಕಾಗುತ್ತದೆ. ಆದ್ದರಿಂದ ಈ ಧಾರಕ ನಿಧಾನಗತಿಯಲ್ಲಿ ಅಥವಾ ಕೆಲವೊಮ್ಮೆ ಮಾತ್ರ ಸುತ್ತುವ ದಂಡಗಳಿಗೆ ಉಪಯೋಗಿಸಲ್ಪಡುತ್ತದೆ.

 ಕವಚದ ಅಚ್ಚಿನ ಧಾರಕ: ಇದು ಸರಳ ರೀತಿಯ ಧಾರಕದ ಒಂದು ಸುಧಾರಣೆ. ಇದರಲ್ಲಿ ಬ್ಯಾಬಿಟ್ ಲೋಹ ಅಥವಾ ಗನ್ ಲೋಹದ ಒಂದು ಕವಚವನ್ನು ರಂಧ್ರದ ಒಳಭಾಗಕ್ಕೆ ತೊಡಿಸಲಾಗಿರುತ್ತದೆ. ಈ ಕವಚದ ಒಳಭಾಗದಲ್ಲಿ ದಂಡ ಸುತ್ತುತ್ತದೆ. ಕವಚ ಸವೆದಾಗ ಬದಲಿಸಬಹುದು. ಜೋಡಣೆ ಕಷ್ಟವಲ್ಲ. ವೆಚ್ಚವೂ ಹೆಚ್ಚಲ್ಲ.

 ಜೋಡಣೆಗೆ ಅನುಕೂಲವಾಗುವಂತೆ ಧಾರಕವನ್ನು ಎರಡು ಭಾಗಗಳಲ್ಲಿ ತಯಾರಿಸುವುದುಂಟು, ಇದನ್ನು ಲೋಹಕೋಶಧಾರಕದಲ್ಲಿ ನೋಡಬಹುದು.

 ಧಾರಕ ಮತ್ತು ಅಚ್ಚಿನ ಸಂಪರ್ಕ ಭಾಗಗಳ ನಡುವಣ ಘರ್ಷಣೆಯನ್ನು ಕಡಿಮೆ ಮಾಡಲು ಮೃದುಚಾಲಕವನ್ನು (ಹೆರೆ, ಲೂಬ್ರಿಕೆಂಟ್) ಉಪಯೋಗಿಸಬೇಕು. ಅದಕ್ಕಾಗಿ ಇರುವ ರಂಧ್ರವನ್ನು ಚಿತ್ರ 2 ರಲ್ಲಿ ಕಾಣಬಹುದಾಗಿದೆ.

 ಸುತ್ತುತ್ತಿರುವ ದಂಡದ ಆಧಾರವಾಗಿರುವ ಧಾರಕಗಳಲ್ಲಿ ಸಾಮಾನ್ಯವಾಗಿ ತೈಲವೇ ಮೃದುಚಾಲಕವಾಗಿರುತ್ತದೆ. ಕೆಲವೊಮ್ಮೆ ಗ್ರೀಸ್, ನೀರು ಮುಂತಾದುವುಗಳನ್ನು ಉಪಯೋಗಿಸಲಾಗುತ್ತದೆ.

 ಅಚ್ಚಿನ ಸುತ್ತುವಿಕೆಯ ವಿವಿಧ ಘಟ್ಟಗಳಲ್ಲಿ ತೈಲದ ಹಾಳೆ ಹಾಗೂ ದಂಡ ಮತ್ತು ಅಚ್ಚುಗಳ ನಡುವಣ ಸಂದುಗಳು ಹೇಗಿರುತ್ತವೆನ್ನುವುದನ್ನು ಚಿತ್ರ 3 ರಲ್ಲಿ ತೋರಿಸಿದೆ.

 ಅಚ್ಚು ಕೆಲಸ ಮಾಡದಿರುವಾಗ ಅದರ ಭಾರದಿಂದ ತೈಲ ಪಕ್ಕಕ್ಕೆ ಸರಿದು ಅಚ್ಚು ಮತ್ತು ಧಾರಕಗಳ ನಡುವೆ ಒಂದು ಬಿಂದುವಿನಲ್ಲಿ (ಚಿತ್ರ (ಅ), ಕ್ಷ-ಬಿಂದು) ಸಂಪರ್ಕವೇರ್ಪಡುತ್ತದೆ. ಅಚ್ಚು ತನ್ನ ಚಲನೆಯನ್ನು ಪ್ರಾರಂಭಿಸಿದಾಗ ಬಲಕ್ಕೆ ಉರುಳಿ ಒಂದು ಬಿಂದುವಿನಲ್ಲಿ (ಚಿತ್ರ (ಆ), ಕ್ಷ-ಬಿಂದು) ಸಂಪರ್ಕವೇರ್ಪಡುತ್ತದೆ. ತೈಲ ಒಂದು ಬೆಣೆಯ ರೂಪದಲ್ಲಿರುತ್ತದೆ. ವೇಗ ಹೆಚ್ಚಾದಂತೆ ಅಚ್ಚು ಒಂದು ಪಂಪಿನಂತೆ ಕೆಲಸ ಮಾಡಿ ತೈಲದ ಒತ್ತಡವನ್ನು ಹೆಚ್ಚಿಸುತ್ತದೆ. ಈ ಒತ್ತಡದಿಂದ ಅಚ್ಚು ಮೇಲಕ್ಕೆತ್ತಲ್ಪಟ್ಟು ತೈಲದಲ್ಲಿ ತೇಲುತ್ತದೆ. ಕನಿಷ್ಠ ಸಂದನ್ನು ಚಿತ್ರ (ಇ) ಶ-ಬಿಂದುವಿನಲ್ಲಿ ಕಾಣಬಹುದು. ಇಲ್ಲಿ ತೈಲ ಒಂದು ತೆಳುಹಾಳೆಯ ರೂಪದಲ್ಲಿದ್ದು ಅಚ್ಚು ಮತ್ತು ಧಾರಕಗಳನ್ನು ಬೇರ್ಪಡಿಸುತ್ತದೆ. ಅಚ್ಚಿನ ಧಾರಕದ ದಕ್ಷತೆ ಅಚ್ಚು ಮತ್ತು ಧಾರಕಗಳನ್ನು ಪ್ರತ್ಯೇಕಿಸಿಡುವ ತೈಲದ ಶಕ್ತಿಯನ್ನು ಅವಲಂಬಿಸಿದೆ. ತೈಲದ ಅಧಿಕ ಬಳಕೆ ಅಪಾಯಕಾರಿ. ಹೆಚ್ಚು ವೇಗದಲ್ಲಿ ಸುತ್ತುವಾಗ ತೈಲ ಅಧಿಕವಾದರೆ ಅದು ತಡೆ  ಯಲ್ಪಟ್ಟು, ಘರ್ಷಣೆಯುಂಟಾಗಿ ಶಾಖ ಉತ್ಪತ್ತಿಯಾಗುತ್ತದೆ. ಕಡಿಮೆ ಪ್ರಮಾಣದ ತೈಲದ ಬಳಕೆ ಸಹ ಅಪಾಯಕಾರಿ. ಹೆಚ್ಚು ವೇಗದಲ್ಲಿ ಸುತ್ತುವಾಗ ತೈಲ ಕಡಿಮೆಯಾದರೆ ಅಚ್ಚು ಮತ್ತು ಧಾರಕಗಳ ನಡುವೆ ಸಂಪರ್ಕವೇರ್ಪಟ್ಟು, ಘರ್ಷಣೆಯಿಂದ ಶಾಖೋತ್ಪತ್ತಿಯಾಗುತ್ತದೆ. ಆದ್ದರಿಂದ ಕ್ಲುಪ್ತ ಪ್ರಮಾಣದಲ್ಲಿ ತೈಲವನ್ನು ಬಳಸುವುದು ಅವಶ್ಯಕ.

 ಪ್ರಾರಂಭದಲ್ಲಿ ಘರ್ಷಣೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಅದನ್ನು ಎದುರಿಸಲು ಶಕ್ತಿ ವ್ಯಯವಾಗುತ್ತದೆ. ಆದ್ದರಿಂದ ಆಗಾಗ್ಗೆ ನಿಲ್ಲಿಸಿ ಚಲಿಸಬೇಕಾದ ಯಂತ್ರಗಳಿಗೆ ಅಚ್ಚಿನ ಧಾರಕವನ್ನು ಉಪಯೋಗಿಸಲಾಗುವುದಿಲ್ಲ.

 ಪಾದಪೀಠಧಾರಕ (ಫುಟ್‍ಸ್ಟೆಪ್ ಬೇರಿಂಗ್): ಪಾದಪೀಠ ಎರಕಹೊಯ್ದ ಒಂದು ಘಟಕವಾಗಿದ್ದು ಅದರಲ್ಲಿ ಮೇಲಿಂದ ಕೆಳಕ್ಕೆ ಒಂದು ಕುರುಡು ರಂಧ್ರವನ್ನು ಕೊರೆದಿರಲಾಗುತ್ತದೆ. ಈ ರಂಧ್ರಕ್ಕೆ ತೊಡಿಸಿರುವ ಒಂದು ಬ್ಯಾಬಿಟ್ ಲೋಹ ಕವಚದ ಒಳಭಾಗದಲ್ಲಿ ಸುತ್ತುವ ದಂಡ ಧಾರಕದ ಒಳಗಡೆಯೇ ಕೊನೆಗೊಳ್ಳುತ್ತದೆ. ಪಾದಪೀಠದ ಸಂಪರ್ಕಭಾಗ ಸವೆದುಹೋಗದಂತೆ ದಂಡದ ತುದಿಯ ಕೆಳಗೆ ಗನ್ ಲೋಹದ ಒಂದು ಬಿಲ್ಲೆಯನ್ನು ಜೋಡಿಸಿರುತ್ತಾರೆ. ತಿರುಪುಗಳಿಂದ ಬಂಧಿಸಲು ಅನುಕೂಲವಾಗುವಂತೆ ಕೆಳಭಾಗವನ್ನು ವಿಸ್ತರಿಸಲಾಗಿರುತ್ತದೆ.

 ಈ ಧಾರಕವನ್ನು ಲಂಬದಂಡಗಳಿಗೆ (ವರ್ಟಿಕಲ್ ಷಾಫ್ಟ್ಸ್) ಮಾತ್ರ ಉಪಯೋಗಿಸಲಾಗುತ್ತದೆ. (ನೋಡಿ- ಧಾರಕ)

 

(ಎಚ್.ವಿ.ಸಿ.)

   (ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ